ಬೆಂಗಳೂರಿನ ಇತಿಹಾಸ ಮತ್ತು ಬಿಬಿಎಮ್‍ಪಿ ಕರಡು

ಬೆಂಗಳೂರಿನ ಇತಿಹಾಸ

ಬೆಂಗಳೂರು, ಸಮುದ್ರಮಟ್ಟದಿಂದ ಸುಮಾರು 949 ಮೀಟರ್(3113 ಅಡಿ)ಗಳ ಎತ್ತರದಲ್ಲಿ ದಕ್ಷಿಣ ಪ್ರಸ್ಥಭೂಮಿಯಲ್ಲಿದ್ದು, ಭಾರತದ ಎಲ್ಲಾ ನಗರಗಳ ಪೈಕಿ ಅತ್ಯುತ್ತಮ ಹವಾಮಾನ ವಾತಾವರಣ ಹೊಂದಿದೆ. "ಬೆಂದ ಕಾಳು" ಎಂಬ ಪದಗಳಿಂದ ಬೆಂಗಳೂರು ಪದ ಹುಟ್ಟುಕೊಂಡಿತು ಎಂಬುದು ಒಂದು ಪ್ರತೀತಿ. ವಿಜಯನಗರ ಸಾಮ್ರಾಜ್ಯದ ವೀರ ಬಲ್ಲಾಳನು ಒಮ್ಮೆ ಕಾಡಿನಲ್ಲಿ ಕಳೆದುಹೋದಾಗ ಅಕಸ್ಮಾತ್ ಒಂದು ಒಂಟಿ ಗುಡಿಸಲನ್ನು ನೋಡಿದನಂತೆ. ಅದರಲ್ಲಿ ವಾಸವಾಗಿದ್ದ ವಯೋವೃದ್ಧೆಯೊಬ್ಬಳು ಅವನಿಗೆ ತಿನ್ನಲು ಬೆಂದ ಕಾಳುಗಳನ್ನು ಮಾತ್ರ ನೀಡಿದಳಂತೆ. ಆದ್ದರಿಂದಲೇ ಈ ಸ್ಥಳಕ್ಕೆ ಬೆಂದ ಕಾಳೂರು ಎಂಬ ಹೆಸರು ಬಂದಿತು. ಇದೇ ಬೆಂದಕಾಳೂರು ಕಾಲಾಂತರದಲ್ಲಿ ಕನ್ನಡದಲ್ಲಿ ಬೆಂಗಳೂರು ಎಂದೂ ಆಂಗ್ಲ ಭಾಷೆಯಲ್ಲಿ Bangalore ಎಂದೂ ಪ್ರಸಿದ್ಧವಾಯಿತು. ಆದರೆ, ಬೇಗೂರು ಗ್ರಾಮದ ದೇವಾಯಲಯ ಕೆತ್ತನೆಯೊಂದರಲ್ಲಿ ಕ್ರಿ.ಶ. 9ರಲ್ಲೇ, ಅಂದರೆ ಬಲ್ಲಾಳನ ಸಮಯದ ಮೊದಲೇ " ಬೆಂಗಳೂರು" ಎಂಬ ಹೆಸರು ದಾಖಲಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಇಂದಿಗೂ ಕೂಡ "ಬೆಂಗಳೂರು" ಕೊಡಿಗೇಹಳ್ಳಿ ಪ್ರದೇಶದ ನಗರ ಪರಿಮಿತಿಯೊಳಗೆ ಇದ್ದು, ಇದನ್ನು ಈಗ ಹಳೆ ಬೆಂಗಳೂರು ಅಥವಾ "HalebengaLooru" ಎಂದು ಕರೆಯಲಾಗುತ್ತದೆ.

 

ಕೆಂಪೇಗೌಡ

ಪ್ರಸ್ತುತ ನಾವು ನೋಡುತ್ತಿರುವ ಬೆಂಗಳೂರನ್ನು 1537ರಲ್ಲಿ ಕೆಂಪೇಗೌಡರು ವಿನ್ಯಾಸಗೊಳಿಸಿದರು. ಅವರ ನೆಚ್ಚಿನ ಹವ್ಯಾಸವಾದ ಬೇಟೆಯ ಸಮಯದಲ್ಲಿ ಒಮ್ಮೆ ಮೊಲವೊಂದು ನಾಯಿಯ ಬೆನ್ನಟ್ಟಿ ಹೋಗುವುದನ್ನು ಗಮನಿಸಿ ಆಶ್ಚರ್ಯಗೊಂಡು ಇದಕ್ಕೆ "ಗಂಡುಭೂಮಿ" ಎಂದು ಹೆಸರಿಟ್ಟರು. ಯಲಹಂಕದ ಉಸ್ತುವಾರಿ ವಹಿಸಿಕೊಂಡಿದ್ದ ಕೆಂಪೇಗೌಡರು 1537ರಲ್ಲಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿ, ರಾಜ ಅಚ್ಯುತರಾಯನ ನೆರವಿನಿಂದ ಕೋಟೆಯ ಒಳಗೇ, ಬಳೇಪೇಟೆ, ಅರಳೆಪೇಟೆ(ಕಾಟನ್‍ಪೇಟೆ), ಹಾಗು ಚಿಕ್ಕಪೇಟೆ ಎಂಬ ಸಣ್ಣ ಪಟ್ಟಣಗಳನ್ನು ನಿರ್ಮಿಸಿದರು. ಇಂದು ಈ ಸಣ್ಣ ಪ್ರದೇಶಗಳೇ ನಗರದ ಪ್ರಮುಖ ಸಗಟು ಹಾಗು ವಾಣಿಜ್ಯ ವ್ಯಾಪಾರೀ ಸ್ಥಳಗಳಾಗಿವೆ. ನಗರದ ಎಲ್ಲೆಯನ್ನು ಗುರುತಿಸುವ ಸಲುವಾಗಿ, ಕೆಂಪೇಗೌಡನ ಮಗನು ನಾಲ್ಕು ನಿಗಾಗೋಪುರಗಳನ್ನು ನಿರ್ಮಿಸಿದರು. ಇಂದಿಗೂ ಇವುಗಳನ್ನು ನೋಡಬಹುದಾಗಿದ್ದರೂ, ಪ್ರಸ್ತುತ ನಗರದ ಹೃದ್ಭಾಗಕ್ಕೆ ಇವು ಬರುತ್ತವೆ.  
1638ರಲ್ಲಿ ಶಿವಾಜಿಯ ತಂದೆ ಶಹಜಿರಾವ್ ಭೋನ್ಸ್‍ಲೆ, ನಗರವನ್ನು ಸೆರೆಹಿಡಿದರು. 1687ರಲ್ಲಿ ಔರಂಗಜೇಬನ ಸೈನ್ಯವು ನಗರವನ್ನು ಸೆರೆಹಿಡಿದು, ಅದನ್ನು ಕೇವಲ 3,00,000 ಲಕ್ಷ ರೂಪಾಯಿಗಳಿಗೆ ಒಡೆಯರ್‍ರಿಗೆ ಮಾರಿತು. ನಂತರ ಒಡೆಯರ್ ರವರು, 1759ರಲ್ಲಿ ಬೆಂಗಳೂರಿನ ಅತ್ಯಂತ ಸುಂದರ ಉದ್ಯಾನವನವಾದ ಸುಪ್ರಸಿದ್ಧ ಲಾಲ್‍ಭಾಗ್‍ಅನ್ನು ನಿರ್ಮಿಸಿದರು. ಅದೇ ವರ್ಷದಲ್ಲಿ, ಎರಡನೆ ಕೃಷ್ಣರಾಜ ಒಡೆಯರ್ ಅವರಿಂದ ಹೈದರ್ ಅಲಿಯು ಬೆಂಗಳೂರನ್ನು ಜಹಗೀರಾಗಿ ಸ್ವೀಕರಿಸಿದನು ದಕ್ಷಿಣ ಕೋಟೆಗೆ ಅವರು ಕೋಟೆ ನಿರ್ಮಿಸಿ ಬೆಂಗಳೂರನ್ನು ಒಂದು ಸೇನಾ ನಗರವನ್ನಾಗಿ ಮಾಡಿಕೊಂಡರು.
1799ರಲ್ಲಿ ನಡೆದ 4ನೆ ಮೈಸೂರು ಯುದ್ಧದಲ್ಲಿ ಟಿಪು ಸುಲ್ತಾನರು ಮಡಿದಾಗ, ಬೆಂಗಳೂರು ಸೇರಿದಂತೆ ರಾಜ್ಯವನ್ನು ಬ್ರಿಟೀಷರು ಮೂರನೆ ಕೃಷ್ಣರಾಜ ಒಡೆಯರರಿಗೆ ಕೊಟ್ಟರೂ, ಅದರ ನಿವಾಸಿಗಳು ಬೆಂಗಳೂರಿನಲ್ಲೇ ನೆಲೆಸಿದರು.
19ನೆ ಶತಮಾನದ ಆರಂಭದಲ್ಲಿ ಜನರಲ್ ಪೋಸ್ಟ್ ಆಫೀಸ್‍ಅನ್ನು ತೆರೆಯಲಾಯಿತು ಮತ್ತು ಒಂಭತ್ತು ವರ್ಷಗಳ ನಂತರ ಅಂದರೆ 1809ರಲ್ಲಿ ಕಂಟೋನ್ಮೆಂಟ್‍ಅನ್ನು ಸ್ಥಾಪಿಸಲಾಯಿತು. 1831ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ದುರಾಡಳಿತ ನಡೆಸುತ್ತಿದ್ದಾರೆ ಎಂದು ದೂರಿದ ಬ್ರಿಟೀಷರು ಮೈಸೂರು ರಾಜ್ಯದ ಆಡಳಿತವನ್ನು ಹಿಂಪಡೆದುಕೊಂಡರು.
ಬ್ರಿಟೀಷರ ಪ್ರಭಾವದಿಂದಾಗಿ ರೈಲ್ವೆ, ಟೆಲಿಗ್ರಾಫ್, ಅಂಚೆ ಹಾಗು ಪೋಲಿಸ್ ಇಲಾಖೆಯಂತಹ ಆಧುನಿಕ ಸೌಲಭ್ಯಗಳು ಬೆಂಗಳೂರಿಗೆ ಲಭ್ಯವಾದವು. 1859ರಲ್ಲಿ ನಗರದಿಂದ ಮೊತ್ತಮೊದಲ ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು. ಐದು ವರ್ಷಗಳ ನಂತರ, ಅಂದರೆ 1864ರಲ್ಲಿ ಸ್ಯಾಂಕಿಯು ಸುಂದರವಾದ ಕಬ್ಬನ್ ಪಾರ್ಕ್‍ಅನ್ನು ನಿರ್ಮಿಸಿದರು. ಆ ಶತಮಾನದ ಕೊನೆಯಲ್ಲಿ ಅಟ್ಟಾರಾ ಕಚೇರಿ ಹಾಗು ಬೆಂಗಳೂರು ಅರಮನೆಯನ್ನು ನಿರ್ಮಿಸಲಾಯಿತು. 20ನೆ ಶತಮಾನದಲ್ಲಿ ಮೊತ್ತಮೊದಲ ಮೋಟಾರು ಕಾರು ನಗರಕ್ಕೆ ಕಾಲಿರಿಸಿತು.
1881ರಲ್ಲಿ ಬ್ರಿಟೀಷರು ನಗರವನ್ನು ಪುನಃ ಒಡೆಯರರಿಗೆ ಹಿಂದಿರುಗಿಸಿದರು. ಬೆಂಗಳೂರು ತನ್ನ ಆಧುನಿಕತೆಯನ್ನು ಪಡೆಯಲು ಸರ್ ಮಿರ್ಜಾ ಇಸ್ಮಾಯಿಲ್ ಹಾಗು ಸರ್ ಎಮ್.ವಿಶ್ವೇಶ್ವರಯ್ಯನವರು ಕಾರಣರಾದರು.
ಅಲ್ಲಿಂದ ನಗರವು ಬೃಹತ್ತಾಗಿ ಬೆಳೆದು ಇಂದು ನೀವು ನೋಡುತ್ತಿರುವ ನಗರವಾಗಿ ಉದ್ಭವಿಸಿದೆ. ಬೆಂಗಳೂರು ಭಾರತದ ಐದನೆ ಅತಿದೊಡ್ಡ ಹಾಗು ಏಶ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.
 

ಬೃ.ಬೆ.ಮ.ಪಾ.ದ ಇತಿಹಾಸ

Responsive image

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರಿನ ಪುರಸಭೆಯ ಆಡಳಿತದ ಇತಿಹಾಸ ಮಾರ್ಚ್ 27, 1862ರಿಂದ ಆರಂಭವಾಗುತ್ತದೆ. 1850ರ ಪಟ್ಟಣಗಳ ಸುಧಾರಣೆ ಕಾಯಿದೆಯಡಿ ಪೌರಸಭಾ ಮಂಡಳಿಯಾಗಿ ರಚಿತವಾದ ನಗರ ಒಂಭತ್ತು ಪ್ರಮುಖ ನಾಗರಿಕರಿಂದ ಈ ಆಡಳಿತ ಆರಂಭವಾಯಿತು. ನಂತರ, ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಕೂಡ ಇದೇ ರೀತಿಯ ಪೌರಸಭಾ ಮಂಡಳಿಯನ್ನು ರಚಿಸಲಾಯಿತು. 1881ರಲ್ಲಿ ಎರಡೂ ಮಂಡಳಿಗಳನ್ನು ಕಾನೂನುಬದ್ಧಗೊಳಿಸಿ, ಇವೆರೆಡೂ, ಬೆಂಗಳೂರು ನಗರ ಪುರಸಭೆ ಹಾಗು ಬೆಂಗಳೂರು ನಾಗರಿಕ ಹಾಗು ಸೇನಾಪಡೆ ಪುರಸಭೆ ಎಂಬ ಹೆಸರಿನಿಂದ ಎರಡು ಸ್ವತಂತ್ರ ಮಂಡಳಿಗಳಾಗಿ ಕಾರ್ಯನಿರ್ವಹಿಸಲಾರಂಭಿಸಿದವು. ಮುಂದಿನ ವರ್ಷದಲ್ಲಿ ಚುನಾಯಿತ ಪ್ರತಿನಿಧಿಗಳ ಪರಿಕಲ್ಪನೆ ಅಸ್ತಿತ್ವಕ್ಕೆ ಬಂತು ಮತ್ತು ಆಸ್ತಿ ತೆರಿಗೆ ಕೂಡ ಅದೇ ವರ್ಷ ಜಾರಿಗೆ ಬಂದಿತು.
2007ರ ಜನವರಿಯಲ್ಲಿ ಕರ್ನಾಟಕ ಸರ್ಕಾರವು, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಎಂಬ ಏಕೈಕ ಆಡಳಿತ ಮಂಡಳಿಯನ್ನು ರಚಿಸುವ ಸಲುವಾಗಿ, ಏಳು ನಗರ ಪೌರಸಭೆ ಪರಿಷತ್ತು(ಸಿಎಮ್‍ಸಿ), ಒಂದು ಪಟ್ಟಣ ಪುರಸಭಾ ಪರಿಷತ್ತು(ಟಿಎಮ್‍ಸಿ), ಹಾಗು ನಗರದ ಸುತ್ತಲಿರುವ 111 ಗ್ರಾಮಗಳನ್ನು ಪ್ರಸ್ತುತದ ಬೆಂಗಳೂರು ಮಹಾನಗರಪಾಲಿಕೆಯಡಿ ವಿಲೀನಗೊಳಿಸುವ ಸೂಚನೆಯನ್ನು ಹೊರಡಿಸಿತು. ಏಪ್ರಿಲ್ 2007ರಲ್ಲಿ ಈ ಪ್ರಕ್ರಿಯೆಯು ಪೂರ್ಣಗೊಂಡು ಮಂಡಳಿಯನ್ನು "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ" ('BruhatBengaluru Mahanagara Palike'.)ಎಂದು ಮರುನಾಮಕರಣ ಮಾಡಲಾಯಿತು.
 
GROWING BANGALORE SPRAWL OVER TWO Decades
Responsive image
Responsive image
Responsive image